ಆಟಿ ಕಡೆಂಜ
ತುಳುನಾಡಿನ ಒಂದು ಜಾನಪದ ಕಲೆ. ತುಳು ಆಟಿ ತಿಂಗಳಲ್ಲಿ (ಕರ್ಕಾಟಕ ಮಾಸ) ಹರಿಜನ ಪಂಗಡಕ್ಕೆ ಸೇರಿದ ನಲ್ಕೆ ಎಂಬ ಪಂಗಡದವರು ಸಣ್ಣ ಹುಡುಗನೊಬ್ಬನಿಗೆ ತಲೆಗೆ ಕಂಗಿನ ಹಾಳೆಯ ಟೊಪ್ಪಿಗೆ ಇಟ್ಟು, ಮುಖಕ್ಕೆ ಬಿಳಿಯ ಬಣ್ಣ ಬಳಿದು, ದಡ್ಡಿಯ (ಒಂದು ತರದ ಕಳ್ಳಿ) ನಾರಿನ ಗಡ್ಡ ವಿೂಸೆ ಬಿಗಿದು, ಕೆಂಪು ಅರಿವೆಯ ಅಂಗಿ ಚಲ್ಲಣ ತೊಡಿಸಿ, ಕಾಲಿಗೆ ಗೆಜ್ಜೆ ಕಟ್ಟಿ, ಕೈಯಲ್ಲೊಂದು ಓಲೆಗರಿಯ ತತ್ರ (ಛತ್ರ) ಕೊಟ್ಟು ಆಟಿ ಕಡೆಂಜನ ವೇಷ ಹಾಕಿಸುತ್ತಾರೆ. ವೇಷಧಾರಿಯ ಜೊತೆಗಿರುವ ಮತ್ತೊಬ್ಬ ತೆಂಬರೆ ಎಂಬ ಚರ್ಮವಾದ್ಯ ಒಂದನ್ನು ಬಾರಿಸಿ, ಆಟಿ ಕಡೆಂಜನಿಗೆ ಸಂಬಂಧಪಟ್ಟ ಪಾಡ್ದನ ಹಾಡುತ್ತಿರುವಂತೆಯೇ ವೇಷಧಾರಿ ಮೆಲ್ಲನೆ ಕಾಲನ್ನಾಡಿಸುತ್ತ ಕೈಯಲ್ಲಿ ಹಿಡಿದಿರುವ ತಂತ್ರವನ್ನು ತಿರುಗಿಸುತ್ತ ಹಿಂದು ಮುಂದು ಹೋಗುತ್ತಿರುತ್ತಾನೆ.

	ತುಳುವರ ಸಂಪ್ರದಾಯದಂತೆ ಆಟಿ ತಿಂಗಳು ಶುಭ ಶೋಭನಾದಿಗಳು ನಡೆಯದ ಅಶುಭದ ತಿಂಗಳು. ಆಗ ಮನೆಯ ಅಂಗಳಕ್ಕೆ ಬಂದು ಕುಣಿದ ಆಟಿ ಕಡೆಂಜನಿಗೆ ತಡ್ಪೆಯಲ್ಲಿ (ಬತ್ತಗೇರುವ ಅಗಲವಾದ ಒಂದು ಸಾಧನ) ಸ್ವಲ್ಪ ಬತ್ತ, ಅಕ್ಕಿ, ಹುಳಿ, ಮೆಣಸು, ಉಪ್ಪು, ಒಂದು ತುಂಡು ಇದ್ದಲು, ಸ್ವಲ್ಪ ಅಟ್ಟದ ಮಸಿ - ಇಷ್ಟನ್ನೂ ಇಟ್ಟುಕೊಡುತ್ತಾರೆ. ಅಲ್ಲದೆ ಆತ ಅಂಗಳ ಇಳಿದು ಹೋಗುವಾಗ ಕುರಿನೀರನ್ನು (ಅರಿಸಿನ ಹಾಕಿದ ಬಣ್ಣದ ನೀರು) ಆತನ ಮೇಲೆ ಸಿಂಪಡಿಸುತ್ತಾರೆ. ಹೀಗೆ ಮಾಡಿದರೆ ಮನೆಯ ಅಶುಭ ಕಳೆಯುತ್ತದೆ ಎಂದು ತುಳುನಾಡ ಹಳ್ಳಿಗರ ನಂಬಿಕೆ.							
(ಎ.ಎಲ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ